flower

ಹೂವುಗಳನ್ನು ಇಷ್ಟಪಡುವವರಿಗೆ, ಹೂವಿನಷ್ಟೇ ಚಂದವಾದ ಸುಕೋಮಲಭಾವನೆಗಳು ವ್ಯಕ್ತವಾದ ಒಂದು ಲೇಖನವಿದು. ಚಿಂತನೀಯವೂ ಆಗಿದೆ!
=======================
ಹೂವುಗಳ ಸ್ವಗತದಲ್ಲಿ ಬಾಳಿನ ಗಣಿತ
[ವಿದ್ಯಾಶಂಕರ ಶರ್ಮ * ಲೋಕಧ್ವನಿ * 26Mar2025]

ಜಗದ ಒಡಲಲ್ಲಿ ಹುದುಗಿರುವ ಅನೇಕ ವಿಸ್ಮಯಗಳಲ್ಲಿ ಬಣ್ಣಬಣ್ಣದ ಹೂವುಗಳು ನಮ್ಮನ್ನು ಬಹುವಾಗಿ ಆಕರ್ಷಿಸುವ ಸೌಂದರ್ಯದ ಗಣಿಗಳು. ಭಗವಂತನ ಪೂಜೆಗೆ, ಅಂಗನೆಯರ ಮುಡಿಗೆ, ಅಲಂಕಾರಕ್ಕೆ ಹೂವುಗಳು ಮುಡಿಪು. ಇಂತಹ ಮನಸೆಳವ ಪುಷ್ಪಗಳ ಸ್ವಗತವನ್ನು ನಾವು ಒಮ್ಮೆಯಾದರೂ ಕೇಳಿಸಿಕೊಳ್ಳಲು ಪ್ರಯತ್ನಿಸಿದ್ಧೇವೆಯೇ? ಕೇಳಿಸೆಕೊಂಡರೆ ಅವು ಹೇಳುವ ಭಾವಗಳು ಅಪಾರ.

ಹೂವುಗಳು ಒಂದು ಬಾರಿ ಸಭೆ ನೆಡೆಸಿದವು, ತಮ್ಮ ಕಷ್ಟ ಸುಖದ ಚರ್ಚೆಯೇ ಆ ಸಭೆಯ ಮುಖ್ಯ ವಿಷಯವಾಗಿತ್ತು. ಮೊದಲಿಗೆ ಹೂವುಗಳ ರಾಣಿ ಕಮಲವು ತನ್ನ ಮಾತನ್ನು ಆರಂಭ ಮಾಡಿತು. ಅದು ಹೇಳಿತಂತೆ- ʼನನ್ನ ಪರಿಪಾಟಲು ಯಾರಿಗೂ ಬೇಡ, ಸದಾ ಕೆಸರಿನಲ್ಲಿ ಇರಬೇಕು, ಸುತ್ತ ಬರಿಯ ಕೊಳಕು ನೀರು, ದುಂಬಿಯ ಕಾಟ. ಬೇರೆ ಹೂವುಗಳ ತರಹ ನಾನೂ ಮನೆಯ ಮುಂದಿನ, ಅಥವಾ ಉದ್ಯಾವನದಲ್ಲಿ ಮಿನುಗಲು ಆಸೆʼ. ಆಗ ಇತರ ಹೂವುಗಳು ಕೇಳಿದವಂತೆ, ʼನೀನು ಕೆಸರಿನಲ್ಲಿ ಇದ್ಧರೂ ಆ ಕೆಸರು ನಿನಗೆ ತಾಕುವುದೇ ಇಲ್ಲ! ಅದು ಹೇಗೆ ನೀನು ನಿನ್ನನ್ನು ಸುತ್ತಲೂ ಇರುವ ಕಲ್ಮಷಗಳಿಂದ ಪ್ರಭಾವಕ್ಕೆ ಒಳಗಾಗದೇ ನಗುತ್ತ ಇರುತ್ತೀಯೇ?ʼ ಹೌದಲ್ಲ! ನಾವು ಯೋಚಿಸಬೇಕಾದ ವಿಷಯ. ತನ್ನ ಸುತ್ತ ನಕಾರಾತ್ಮಕ ವಾತಾವರಣ ಇದ್ದರೂ ಅದರಿಂದ ಪ್ರಭಾವಿತವಾಗದ ಕಮಲದ ಛಾತಿ ನಮ್ಮದೂ ಆಗಬೇಕಿದೆ. 

ಸಭೆಯಲ್ಲಿ ಅನಂತರ ಮಾತನಾಡಿದ ಹೂವು, ಗುಲಾಬಿ. ʼನನ್ನ ಕತೆ ಏನು ಹೇಳುವುದು? ಮುಳ್ಳುಗಳೇ ತುಂಬಿಬಿಟ್ಟಿವೆ ನನ್ನ ಮೈಯಲ್ಲಿ, ಬಹಳ ನೋವು ನನಗೆʼ ಇದು ಗುಲಾಬಿ ಹೂವಿನ ಪ್ರಲಾಪ. ಆಗ ಇತರ ಹೂವುಗಳು ʼಇಂತಹ ಮುಳ್ಳುಗಳನ್ನು ಹೊಂದಿಯೂ ದಿನವೂ ನಳನಳಿಸುತ್ತೀಯೆ, ನೀನು ಎಷ್ಟು ಕಷ್ಟ ಸಹಿಷ್ಣುʼ ಅಂದವಂತೆ. ನಮ್ಮ ಮನೆಯ ತೋಟದ ಚಿಕ್ಕ ಗುಲಾಬಿ ಎಂತಹ ದೊಡ್ಡ ಪಾಠವನ್ನು ನಮಗೆ ನೀಡುತ್ತಿದೆ! ದಿನನಿತ್ಯದ ಚಿಕ್ಕ ರಗಳೆಗಳಿಗೆ ಬೇಸತ್ತು ಬೀಳುವ ನಾವು ಗುಲಾಬಿ ಹೂವಿನ ಎದುರು ಕುಬ್ಜರಾಗಿಬಿಡುತ್ತೇವೆ. 

ಆಮೇಲೆ ಮಾತನಾಡುವ ಸರದಿ ಮಲ್ಲಿಗೆ ಹೂವಿನದು. ಅದರ ತಾಪತ್ರಯವೇ ಬೇರೆ. ತಾನು ಎಲ್ಲಿದ್ಧರೂ ಮನುಷ್ಯರು ತನ್ನನ್ನು ಕಂಡು ಹಿಡಿಯುತ್ತಾರೆ, ನೋವಾಗುವಂತೆ ಕೀಳುತ್ತಾರೆ. ಆಮೇಲೆ ದಾರದಲ್ಲಿ ಕಟ್ಟಿ ದೇವರಿಗೋ ಅಥವಾ ಮುಡಿಗೋ ಇರಿಸುತ್ತಾರೆ. ತನಗೆ ಇದು ಬಹಳವೇ ಕಿರಿಕಿರಿ ಅಂತಂತೆ. ಆಗ ಇತರ ಹೂವುಗಳು ಮಲ್ಲಿಗೆಯನ್ನು ಸಮಾಧಾನ ಮಾಡಿದವಂತೆ, ʼನೀನು ಚಿಕ್ಕದಾಗಿದ್ದರೂ ನಿನ್ನ ಕೀರ್ತಿ ದೊಡ್ಡದು. ನೀನು ಎಲ್ಲರಿಗೂ ಬೇಕಾದವಳು, ನೀನು ಹರಡುವ ಘಮ ಮನಸ್ಸಿಗೆ ಹಿತ ತರುತ್ತದೆʼ. ಚಿಕ್ಕ ಮಲ್ಲಿಗೆ ನಮಗೆ ಅರುಹುವ ದೊಡ್ಡ ನೀತಿ ನೋಡಿ. ನಮ್ಮ ಬಗ್ಗೆ ನಾವು ಕೀಳರಿಮೆ ಹೊಂದಬಾರದು. ನಾವು ಇರುವ ಪರಿಸರದಿಂದಲೇ ಸಾಧನೆ ಸಾಧ್ಯ. ಇದಾದ ಬಳಿಕ ಪಾರಿಜಾತ ಹೂವಿನ ಭಾಷಣ ಪ್ರಾರಂಭವಾಯಿತು. ʼನಾನು ನೆಲದ ಮೇಲೆ ಬೀಳುತ್ತೇನೆ, ಕೆಲವರು ನನ್ನನ್ನು ಆರಿಸಿ ತಮ್ಮ ಬೊಗಸೆಯಲ್ಲೋ, ಬುಟ್ಟಿಯಲ್ಲೋ ತೆಗೆದುಕೊಂಡು ಹೋಗುತ್ತಾರೆ. ಇನ್ನೂ ಕೆಲವರು ನನ್ನನ್ನು ಗಮನಿಸದೇ ತುಳಿಯುತ್ತಾರೆ. ನನಗೆ ಗುಲಾಬಿಯಂತೆ ಚಿಕ್ಕ ಗಿಡದಲ್ಲಿ ಇರುವ ಆಸೆ. ನಾನು ಮನುಷ್ಯರಿಂದ ಅಡಗಿಕೊಂಡು ಇರಲು ಸಾಧ್ಯವೇ ಇಲ್ಲ, ನನ್ನ ಪರಿಮಳ ಬಹುದೂರದವರೆಗೂ ಪಸರಿಸುತ್ತದೆ.ʼ ಆಗ ಇತರ ಹೂವುಗಳು ಪಾರಿಜಾತದ ವೈಶಿಷ್ಟ್ಯವನ್ನು ಅದಕ್ಕೆ ನೆನಪು ಮಾಡಿದವಂತೆ. ಅದು ಪುರಾಣದಲ್ಲಿ ಪ್ರಸ್ತಾವವಾದ ಬಹಳ ವಿಶೇಷ ಹೂವು. ಶ್ರಿಕೃಷ್ಣನು ಪಾರಿಜಾತಕ್ಕಾಗಿ ಇಂದ್ರನೊಡನೆ ಜಗಳವಾಡಿದನು. ಭಗವಂತನ ಪಾದ ಸೇರುವ ಪಾರಿಜಾತ ಸೃಷ್ಟಿಕರ್ತನಲ್ಲಿ ಶರಣಾಗತಿಯ ಭಾವದ ಪ್ರತೀಕ. ನಾವು ನಮ್ಮ ಅಹಂಕಾರವನ್ನು ತ್ಯಜಿಸಿ ಜಗದ ನಿಯಾಮಕನಲ್ಲಿ ಶಿರ ಬಾಗಬೇಕು, ಇದು ಪಾರಿಜಾತ ನಮಗೆ ತಿಳಿಸಿಕೊಡುವ ಕ್ಲುಪ್ತ ಸಂದೇಶ.

ಸುಮಧುರ ಕಂಪಿನ ಸಂಪಿಗೆ ಅನಂತರ ಮಾತನಾಡಿತು. ನನ್ನ ದೊಡ್ಡ ಸಮಸ್ಯೆ, ನಾನು ವಾಸಿಸುವ ಮರವನ್ನೇ ಕಡಿದು ಮನುಷ್ಯರು ತಮ್ಮ ಅನೇಕ ಉಪಯೋಗಗಳಿಗೆ ಬಳಸುತ್ತಾರೆ. ನನ್ನನ್ನು ಕಿತ್ತು ಕೆಲವು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲೂ ಬಳಸುತ್ತಾರೆ. ಇತರ ಹೂವುಗಳು ಅದನ್ನು ಸಮಾಧಾನ ಮಾಡಿದವಂತೆ. ನಿನ್ನ ಪರೋಪಕಾರಿ ಬುದ್ಧಿ ಎಲ್ಲರಲ್ಲಿ ಕಾಣಲು ಸಾಧ್ಯವಿಲ್ಲ, ಅಂದವಂತೆ. ಸಂಪಿಗೆಯಿಂದ ನಾವು ಕಲಿಯಬೇಕಾದುದು ಬಹಳ ಇವೆ. ನಮ್ಮ ಕೈಲಾದಷ್ಟು ಸಹಾಯವನ್ನು ಬೇರೆಯವರಿಗೆ ಮಾಡಲು ನಾವು ಪ್ರಯತ್ನ ಪಡಬೇಕು ಎಂಬ ಉದಾತ್ತ ಧ್ಯೇಯವನ್ನು ಸಂಪಿಗೆ ಎತ್ತಿಹಿಡಿಯುತ್ತದೆ. ಸಭೆಯಲ್ಲಿ ಆಮೇಲೆ ದಾಸವಾಳ ಹೂವು ತನ್ನ ನೋವನ್ನು ತೋಡಿಕೊಂಡಿತಂತೆ. ಒಂದು ದಿನವೂ ಬಿಡದೆ ನಾನು ಗಣಪತಿ ದೇವರ ಪೂಜೆಗೆ ಹೋಗಬೇಕು. ಅದರಲ್ಲೂ ಗಣೇಶ ಚೌತಿ ಬಂತೆಂದರೆ ನನಗೆ ಬಿಡುವಿಲ್ಲ. ಅಲ್ಲದೇ ಕೆಲವು ದೇಶಗಳಲ್ಲಿ ನನ್ನನ್ನು ಕಿತ್ತು ಬೇಯಿಸಿ ಚಹಾ ತಯಾರಿಕೆ, ಪೇಯಗಳನ್ನು ಮಾಡಲಿಕ್ಕೂ ಬಳಸುತ್ತಾರೆ. ನನಗೆ ಬಿಡುವೆಂಬುದೇ ಇಲ್ಲ. ದಾಸವಾಳದ ಸ್ವಗತದಲ್ಲಿ ಹುದುಗಿರುವ ಭಾವಗಳು ಅನೇಕ. ಉರಿ ಬಿಸಲಿನಲ್ಲೂ ಥಳಥಳಿಸುವ ಈ ಹೂವು, ಕಷ್ಟಗಳನ್ನು ನಮ್ಮ ಎದೆಯಲ್ಲಿ ಅಡಗಿಸಿಕೊಂಡು ಹೊರಗೆ ನಗುಮುಖವನ್ನು ಹೊಂದಿರಬೇಕು ಎಂಬ ಆಪ್ತ ನೀತಿಯನ್ನು ಸಾರುತ್ತದೆ. ಇದರ ಬಹು ಉಪಯೋಗ ನಮಗೂ ಅನುಕರಣೀಯ. ಸಹಾಯದ ನಿರೀಕ್ಷೆಯಲ್ಲಿ ಇರುವವರಿಗೆ ನಮ್ಮ ಕೈ ಚಾಚಬೇಕು ಎಂಬುದು ದಾಸವಾಳ ಪ್ರದರ್ಶಿಸುವ ಸದ್ಗುಣ. 

ಹೂವುಗಳ ಸಭೆಯಲ್ಲಿ ಬಹಳ ಮೌನವಾಗಿ ಕುಳಿತ್ತಂತೆ ಕೇದಿಗೆ ಹೂವು. ಇಲ್ಲಿಯವರೆಗಿನ ಯಾವ ಚರ್ಚೆಯಲ್ಲೂ ಅದು ಭಾಗಿಯಾಗಿರಲಿಲ್ಲ. ಆಗ ಇತರ ಹೂವುಗಳು ಅದನ್ನು ಮಾತನಾಡುವಂತೆ ಕೇಳಿದವು. ಆಗ ಕೇದಿಗೆ ಹೇಳಿದಂತೆ- ʼನಿಮ್ಮೆಲ್ಲರ ಕತೆಗಿಂತ ನನ್ನ ಕತೆ ಬೇರೆಯದೇ ಆಗಿದೆ. ನಾನು ಶಿವನ ಕೋಪಕ್ಕೆ ಗುರಿಯಾದ ಹೂವು. ಹಿಂದೆ ಬ್ರಹ್ಮ ದೇವರ ಪರವಾಗಿ ಸುಳ್ಳು ಸಾಕ್ಷಿ ಹೇಳಿ ಶಿವನ ಶಾಪಕ್ಕೆ ಗುರಿಯಾದೆ. ಭಗವಾನ್‌ ಶ್ರಿವಿಷ್ಣು ಮತ್ತು ಬ್ರಹ್ಮ ದೇವರು, ಸೃಷ್ಟಿಯ ಕಾಲದಲ್ಲಿ ಒಂದು ದೊಡ್ಡ ಶಿವಲಿಂಗವನ್ನು ಕಂಡರಂತೆ. ಬ್ರಹ್ಮನು ಲಿಂಗದ ತಲೆಯನ್ನು, ಶ್ರಿವಿಷ್ಣುವು ಲಿಂಗದ ಬುಡವನ್ನು ಹುಡುಕಲು ಹೊರಟರು. ಬ್ರಹ್ಮ ದೇವರು ಮೇಲೆ ಎಷ್ಟು ಹುಡುಕಿದರೂ ಲಿಂಗದ ತಲೆ ಕಾಣಲಿಲ್ಲ. ಅದೇ ಸಮಯದಲ್ಲಿ ನಾನು ಮೇಲಿನಿಂದ ಬರುತ್ತಿದ್ದೆ. ನಾನು ಲಿಂಗದ ಮೇಲಿರಿಸಿದ ಹೂವು ಎಂದೆ. ಆಗ ಬ್ರಹ್ಮ ದೇವರು, ನನಗೆ ತನ್ನ ಪರವಾಗಿ ಸಾಕ್ಷಿ ಹೇಳುವಂತೆ ಕೇಳಿಕೊಂಡರು. ಆದರೆ ಮುಂದೆ ಪರಶಿವನು ನಾವಿಬ್ಬರೂ ಸುಳ್ಳು ಹೇಳಿದೆವು ಎಂದು ಕೋಪಗೊಂಡನು. ಏಕೆಂದರೆ ಆ ಶಿವಲಿಂಗಕ್ಕೆ ಆದಿ ಮತ್ತು ಅಂತ್ಯ ಎರಡೂ ಇಲ್ಲವಾಗಿತ್ತು. ಕೋಪಗೊಂಡ ಈಶ್ವರನು ಕೇದಿಗೆ ಹೂವನ್ನು ತನ್ನ ಪೂಜೆಗೆ ಬಳಸಬಾರದು ಎಂಬ ಶಾಪವನ್ನು, ಮತ್ತು ಬ್ರಹ್ಮ ದೇವರಿಗೆ ಪೂಜೆ ಸಲ್ಲಬಾರದು ಎಂದೂ ಶಾಪ ನೀಡಿದನು. ಕೇದಿಗೆಯ ಈ ವೃತ್ತಾಂತದಲ್ಲಿ ಅಪಾರವಾದ ಅರ್ಥವಿದೆ. ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ನಾವು ಅರಿಯೆವು ಎಂಬುದು ಒಂದು ನೀತಿಯಾದರೆ, ಸುಳ್ಳು ಹೇಳುವುದು ನಮಗೆ ಕಳಂಕವನ್ನು ತರಬಲ್ಲದು ಎಂಬುದು ಇನ್ನೊಂದು ತತ್ತ್ವ. 

ಹೀಗೆ ಬಗೆಬಗೆಯ ಪರಿಮಳ ಸೂಸುವ ಹೂವುಗಳ ಆಪ್ತ ಸಮಾಲೋಚನೆಯಲ್ಲಿ ಜೀವನ ಸೂತ್ರಗಳು ಅಡಗಿರುವ ಪರಿಯನ್ನು ನಾವು ಅರಿತಾಗ ನಿಸರ್ಗ ಎಂತಹ ಅಪೂರ್ವ ಪಾಠಶಾಲೆ ಎಂಬುದು ನಿಚ್ಚಳವಾಗಿ ಕಾಣುತ್ತದೆ.
= = =

Comments

Popular posts from this blog

(ಹೆಳವರು/Narrators)

26.8.2025

ಏನನ್ನೂ ಮಾಡದಿರುವುದು