ಅತಿಕಾಳಜಿ ಮಕ್ಕಳ ಬೆಳವಣಿಗೆಗೆ ತಡೆಗೋಡೆಯಾದೀತು ?
ಅತಿಕಾಳಜಿ
ಮಕ್ಕಳ
ಬೆಳವಣಿಗೆಗೆ
ತಡೆಗೋಡೆಯಾದೀತು
ಮಕ್ಕಳಿಗೆ ದೊಡ್ಡವರು ಸೈಕಲ್ ಕಲಿಸುವಾಗ, ಮೊದಲು ಹ್ಯಾಂಡಲ್ ಹಿಡಿದುಕೊಂಡು ಎಚ್ಚರಿಕೆಯಿಂದ ಓಡಿಸಲು ಕಲಿಸುತ್ತಾರೆ, ನಂತರ ಕೈ ಬಿಡುತ್ತಾರೆ. ಅಂತೆಯೇ, ನಡೆಯುವ ಮಕ್ಕಳು ಕೆಳಗೆ ಬೀಳಲು ಬಿಡಬೇಕು. ಆಗ ಕೆಳಗೆ ಬೀಳುವುದು ಅವರಿಗೆ ಅಭ್ಯಾಸವಾಗುತ್ತದೆ. ದೊಡ್ಡವರು ರಕ್ಷಣೆಯಾಗಿ ನಿಂತಿರಬೇಕೇ ವಿನಾ, ನಡೆಯುವುದನ್ನು ಕಲಿಸದೆ ಬಿಡಬಾರದು.
ಕಳೆದ ಕಂತಿನಲ್ಲಿ, ಪೇರೆಂಟಿಂಗ್ನ ಮಿಕ್ಕ ವಿಧಗಳ ಕುರಿತು ತಿಳಿದುಕೊಂಡಿದ್ದರ ಜತೆಗೆ, ಸೋಲನ್ನು ಹೇಗೆ ಎದುರಿಸಬೇಕೆಂಬುದನ್ನು ಮಕ್ಕಳಿಗೆ ಹೆತ್ತವರು ಕಲಿಸಬೇಕಾದ ಅಗತ್ಯದ ಕುರಿತು ರ್ಚಚಿಸಿದೆವು. ಈ ನಿಟ್ಟಿನಲ್ಲಿ ಮತ್ತಷ್ಟು ಹೊಳಹುಗಳನ್ನು ನೋಡೋಣ.
ಕೆಲ ತಂದೆ-ತಾಯಿಯರು ‘ಅಜ್ಜ-ಅಜ್ಜಿ’ ಎನಿಸಿಕೊಂಡ ಮೇಲೆ ‘ಮಕ್ಕಳ ಮಕ್ಕಳನ್ನೂ’ ಬಿಡುವುದಿಲ್ಲ; ಅವರ ರಕ್ಷಣೆಯೂ ತಮ್ಮದೇ ಹೊಣೆ ಎಂದುಕೊಳ್ಳುತ್ತಾರೆ. ತಮ್ಮ ಅಭಿಪ್ರಾಯ ಮತ್ತು ನಂಬಿಕೆಗಳನ್ನು ಮೊಮ್ಮಕ್ಕಳ ತಲೆಮೇಲೆ ರುಬ್ಬುತ್ತಾರೆ. ತಮ್ಮ ಮೂಢ-ಮೂರ್ಖ ನಂಬಿಕೆಗಳಿಂದ ಅವರನ್ನು ವಿಚಾರರಹಿತ ಕೂಪದೊಳಗೆ ಎಳೆಯುತ್ತಾರೆ. ಮಗ/ಮಗಳು ಅಡ್ಡಿಪಡಿಸಿದರೆ, ‘ನಿನಗೇನು ತಿಳಿಯುತ್ತದೆ? ನಿನ್ನನ್ನು ನಾವು ಹೀಗೇ ಬೆಳೆಸಿದೆವೇನು?’ ಎಂದು ಗದರಿಸುತ್ತಾರೆ. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ‘ಉಚಿತ’ ಪಾಠಗಳನ್ನು ಹೇಳುತ್ತಾರೆ.
ಇದುವರೆಗೂ ವಿವರಿಸಿದ ಪೇರೆಂಟಿಂಗ್ಗಳಿಂದ ಆಗುವ ನಷ್ಟಕ್ಕೆ ಇದು ಒಂದು ಉದಾಹರಣೆ ಅಷ್ಟೇ. ಈ ರೀತಿ ಬೆಳೆದ ಮಕ್ಕಳು (ಮುಖ್ಯವಾಗಿ ಹುಡುಗಿಯರು) ‘ಈ ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರೇ’ ಎಂದು ತಿಳಿದಿರುತ್ತಾರೆ. ಯಾರು ಏನೇ ಹೇಳಿದರೂ ನಂಬಿಬಿಡುತ್ತಾರೆ. ತಮ್ಮನ್ನು ತಂದೆ-ತಾಯಿ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೋ ಹೊಸ ಬಾಯ್ಫ್ರೆಂಡ್ ಕೂಡ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ನಂಬುತ್ತಾರೆ. ಇತ್ತೀಚೆಗೆ ನಡೆದ ಒಂದು ಕೊಲೆ ಕೇಸ್ ಇದಕ್ಕೆ ಉದಾಹರಣೆ. ಒಬ್ಬ ಹುಡುಗಿ ತನ್ನ ಸ್ನೇಹಿತ ಹೇಳಿದ ಜಾಗಕ್ಕೆ ಹೋದಳು. ಅಲ್ಲಿ ಅವನು ಮತ್ತು ಅವನ ಇಬ್ಬರು ಸ್ನೇಹಿತರು ಸೇರಿ ಅವಳನ್ನು ರೇಪ್ ಮಾಡಿದರು, ವಿಷಯ ಹೊರಗೆ ಬರಬಾರದೆಂದು ಅವಳನ್ನು ಕೊಂದುಹಾಕಿದರು.
ಮೇಲಿನ ಚರ್ಚೆಯನ್ನೆಲ್ಲ ಒಂದು ಮಾತಿನಲ್ಲಿ ಹೇಳಬೇಕೆಂದರೆ, ಗಾಬರಿಯ ಪೇರೆಂಟಿಂಗ್ನ ‘ಭಯ’ದೊಂದಿಗೆ, ಡಿಜರ್ಟ್ ಪೇರೆಂಟಿಂಗ್ನ ‘ವಿಶ್ವಾಸ’ದೊಂದಿಗೆ, ಮಿಲಿಟರಿ ಪೇರೆಂಟಿಂಗ್ನ ‘ಅನುಮಾನ’ದೊಂದಿಗೆ ಹೆಲಿಕಾಪ್ಟರ್ ಪೇರೆಂಟಿಂಗ್ನ ‘ಎಚ್ಚರಿಕೆ’ಯೊಂದಿಗೆ, ಬುಲ್ಡೋಜರ್ ಪೇರೆಂಟಿಂಗ್ನ ‘ಅತಿಪ್ರೀತಿ’ಯೊಂದಿಗೆ ಮಕ್ಕಳನ್ನು ಬೆಳೆಸುತ್ತಾರೆ. ಇದನ್ನೆಲ್ಲ ಓದಿ ‘ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದರಲ್ಲಿ ತಪ್ಪೇನಿದೆ? ಅವರು ಅಪಾಯದಲ್ಲಿ ಸಿಕ್ಕಿಕೊಂಡರೆ ನೋಡುತ್ತ ಸುಮ್ಮನಿರಬೇಕೇ? ಅನುಭವ ಆಯಿತು ಎಂದು ಸಂತೋಷಪಡಬೇಕೇ?’ ಎಂದು ವಾದ ಮಾಡಿದರೆ ಮೇಲೆ ಹೇಳಿದ ಪೇರೆಂಟಿಂಗ್ನ ಲೋಪಗಳು ನಿಮಗರ್ಥವಾಗಿಲ್ಲ ಎಂದರ್ಥ.
# ಪ್ರಪಂಚದಲ್ಲಿರುವ ಜನರೆಲ್ಲ ನಂಬಿಕಸ್ತರೇ ಎಂಬ ಅಭಿಪ್ರಾಯ ಬೆಳೆಸಿಕೊಂಡ ಮಕ್ಕಳು ದೊಡ್ಡವರಾದಾಗ ಯಾರನ್ನೂ ಎಷ್ಟೂ ಅನುಮಾನದಿಂದ ನೋಡುವುದಿಲ್ಲ. ವ್ಯಾಪಾರದಲ್ಲಿ, ವ್ಯವಹಾರದಲ್ಲಿ ಮತ್ತಾ್ಯವುದೇ ರಿಲೇಷನ್ಷಿಪ್ನಲ್ಲಿ ಯಾವುದೇ ಜಾಗ್ರತೆ ವಹಿಸುವುದಿಲ್ಲ.
# ತಮ್ಮ ಮನೆಯವರ ಹಾಗೆ ಹೊರಗಿನವರೂ ಪ್ರಾಮಾಣಿಕರೇ ಎಂದೂ, ಮಾತು ಕೊಟ್ಟರೆ ಅದನ್ನು ನೆರವೇರಿಸುತ್ತಾರೆಂದೂ ನಂಬುತ್ತಾರೆ. ಕೇಳಿದ ಕೂಡಲೇ ಸಾಲ ಕೊಡುತ್ತಾರೆ.
# ತನಗ್ಯಾವ ಕಷ್ಟ ಬಂದರೂ ತಂದೆ-ತಾಯಿ ನೋಡಿಕೊಳ್ಳುತ್ತಾರೆ ಎಂಬ ಭದ್ರತಾಭಾವವು ನಿರ್ಲಕ್ಷ್ಯತನದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸುತ್ತದೆ. ಆ ನಿರ್ಧಾರಗಳಿಂದ ಆಗಬಹುದಾದ ಕಷ್ಟನಷ್ಟಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
# ತಂದೆ-ತಾಯಿಯ ನೆರಳಲ್ಲಿ ತಾವು ಮಾಡುತ್ತಿರುವ ಕೆಲಸಗಳ ಪರಿಣಾಮ, ಭವಿಷ್ಯದಲ್ಲಿ ಉಂಟಾಗುವ ತೊಂದರೆಗಳನ್ನು ಗುರುತಿಸದಂತೆ ಮಾಡುತ್ತದೆ.
# ಡಿಜರ್ಟ್ ಪೇರೆಂಟಿಂಗ್ನಲ್ಲಿ ಪೇರೆಂಟಲ್ ಗೈಡೆನ್ಸ್ ಇರದಿರುವುದರಿಂದ, ತಾವು ಬದುಕುತ್ತಿರುವ ವಿಧಾನವೇ ಸರಿ ಎಂಬ ವಿಶ್ವಾಸ ಒಂದು ಕಡೆ, ಉಳಿದ ಮಕ್ಕಳು ಮನೆಯಲ್ಲಿ ಸ್ವಾತಂತ್ರ್ಯವಿಲ್ಲದ ದುರದೃಷ್ಟವಂತರು ಎಂಬ ಭಾವನೆ ಇನ್ನೊಂದು ಕಡೆ ಉಂಟಾಗುತ್ತವೆ.
# ಮಿಲಿಟರಿ ಪೇರೆಂಟಿಂಗ್ನಲ್ಲಿ ತಂದೆ-ತಾಯಿ ಮೇಲಿನ ಪ್ರೀತಿ ಕ್ರಮೇಣ ಕಡಿಮೆ ಆಗುತ್ತದೆ.
# ಈ ರೀತಿಯ ಬೆಳೆಸುವಿಕೆಯಲ್ಲಿ ಅಮ್ಮ ಒಂದು ಹೇಳಿ, ಅಪ್ಪ ಇನ್ನೊಂದು ಹೇಳಿದರೆ ಮಕ್ಕಳು ಕನ್ಫ್ಯೂಸ್ ಆಗುತ್ತಾರೆ. ಉದಾಹರಣೆಗೆ ‘ದಪ್ಪ ಆಗ್ತಿದ್ದೀಯ ಐಸ್ಕ್ರೀಂ ತಿನ್ನಬೇಡ’ ಎಂದು ಅಮ್ಮ, ‘ಪರವಾಗಿಲ್ಲ ಒಂದು ತಿಂದರೆ ಏನೂ ಆಗುವುದಿಲ್ಲ’ ಎಂದು ಅಪ್ಪ ಹೇಳುವುದು, ಇತ್ಯಾದಿ.
ಸೈಕಲ್ ಕಲಿಕೆಯ ಸಂದರ್ಭದಲ್ಲಿ, ಮೊದಲು ಹ್ಯಾಂಡಲ್ ಹಿಡಿದುಕೊಂಡು ಎಚ್ಚರಿಕೆಯಿಂದ ಓಡಿಸಲು ಕಲಿಸುತ್ತೇವೆ. ನಂತರ ಕೈ ಬಿಡುತ್ತೇವೆ. ನಡೆಯುವ ಮಕ್ಕಳು ಕೆಳಗೆ ಬೀಳಲಿ ಬಿಡಿ. ಆಗ ಕೆಳಗೆ ಬೀಳುವುದು ಅವರಿಗೆ ಅಭ್ಯಾಸವಾಗುತ್ತದೆ. ರಕ್ಷಣೆಯಾಗಿ ನೀವಿರಿ. ಆದರೆ ನಡೆಯುವುದನ್ನು ಕಲಿಸದೆ ಬಿಡಬೇಡಿ. ಆ ರೀತಿ ತಡೆಯುವುದು ಹೆಲಿಕಾಪ್ಟರ್ ಪೇರೆಂಟಿಂಗ್.
ಹದಿನಾರರ ಮಗಳಿಗೆ ಅನ್ನ ಕಲೆಸಿಕೊಡುವುದು ಪ್ರೀತಿ, ಅದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ‘ನಾನಿಲ್ಲದಿದ್ದರೆ ಮಗಳು ಊಟ ಮಾಡುವುದಿಲ್ಲ’ ಎನ್ನುವುದು ಮಾತ್ರ ಗಾಬರಿಯ ಪೇರೆಂಟಿಂಗ್. ಇಂಜಿನಿಯರಿಂಗ್ ಓದುತ್ತಿರುವ ಮಗನ ಜತೆ ಪ್ರತಿಬಾರಿ ಬ್ಯಾಂಕ್ಗೆ ಡ್ರಾಫ್ಟ್ ಕೊಳ್ಳಲು ಹೋಗುವುದು ಬುಲ್ಡೋಜರ್ ಪೇರೆಂಟಿಂಗ್.
ಇನ್ನೊಂದು ಮುಖ್ಯಮಾತು. ಮಕ್ಕಳ ವಯಸ್ಸಿಗೆ ತಕ್ಕಷ್ಟು ಸ್ವಾತಂತ್ರ್ಯವನ್ನು ಕೊಡುವುದರಿಂದ ಲಾಭವೇ ಆಗಬಹುದು, ನಷ್ಟವೇ ಆಗಬಹುದು. ಆದರೆ ಕೊಡದಿದ್ದರೆ ಮಾತ್ರ ನಷ್ಟವೇ ಆಗುತ್ತದೆ.
ಮಕ್ಕಳಲ್ಲಿ ಏಕಾಗ್ರತೆ ಬೆಳೆಸಲು 4 ಸೂತ್ರಗಳು
1. ನೋಟದ ಶಿಸ್ತು: ಹೊಸದಾಗಿ ನಿರ್ವಣವಾಗುತ್ತಿರುವ ಭವನವನ್ನು ನಾವು ಸಾಮಾನ್ಯವಾಗಿ ನೋಡುತ್ತ ನಿಲ್ಲುವುದಿಲ್ಲ; ಆದರೆ ಒಂದು ಬುಲ್ಡೋಜರ್ ಮನೆಗಳನ್ನು ಒಡೆಯುತ್ತಿದ್ದರೆ ಆಸಕ್ತಿಯಿಂದ ನೋಡುತ್ತ ನಿಲ್ಲುತ್ತೇವೆ. ವಕ್ರ ವಿಷಯಗಳನ್ನು ನೋಡುವುದಕ್ಕೆ ಮನಸ್ಸು ಸದಾ ಬಯಸುತ್ತದೆ. ಮೊದಲ ದಿನವೇ ಸಿನಿಮಾ ನೋಡಬೇಕೆಂಬ ಆಸೆ, ಅಶ್ಲೀಲ ವೆಬ್ಸೈಟ್ಗಳನ್ನು ಬ್ರೌಸ್ ಮಾಡುವ ಆಸೆ.. ಇವೆಲ್ಲವೂ ಮನಸ್ಸು ಆಡುವ ಆಟಗಳೇ.
2.ಮಾತಿನ ಶಿಸ್ತು: ಗಾಸಿಪ್ಗಳು ಮನಸ್ಸಿಗೆ ಸಂತೋಷವನ್ನು ಕೊಡುತ್ತವೆ. ಐಡೆಂಟಿಟಿ ಕ್ರೈಸಿಸ್ನಿಂದಾಗಿ ಜನ ಗಂಟೆಗಟ್ಟಲೆ ಚಾಟಿಂಗ್ ಮಾಡುತ್ತಾರೆಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ‘ನನ್ನ ಮಿದುಳಿನಲ್ಲಿ ಬಹಳ ಕಸವಿದೆ. ಅದನ್ನು ನೀನು ತೆಗೆದುಕೊಂಡರೆ ಅದಕ್ಕೆ ಬದಲಾಗಿ ನಿನ್ನ ಕಸವನ್ನು ತೆಗೆದುಕೊಳ್ಳುತ್ತೇನೆ’ ಎಂದುಕೊಳ್ಳುವುದೇ ಈ ಚಾಟಿಂಗ್ನ ಉದ್ದೇಶ. ನಾಲಿಗೆ ತೀಟೆ ಕಡಿಮೆ ಮಾಡಿಕೊಂಡರೆ ಏಕಾಗ್ರತೆ ನಾಲ್ಕುಪಟ್ಟು ಹೆಚ್ಚಾಗುತ್ತದೆ. ಸ್ನೇಹಕ್ಕೆ ಮಾತುಗಳು ಅಗತ್ಯವೇ. ಆದರೆ ಅದೇ ಬದುಕಾಗಬಾರದು ಅಲ್ಲವೇ?
3. ಊಟದ ಶಿಸ್ತು: ನಾವು ಬದುಕುವುದಕ್ಕೆ ತಿನ್ನುತ್ತಿದ್ದೇವಾ? ತಿನ್ನುವುದಕ್ಕಾಗಿ ಬದುಕಿದ್ದೇವಾ? ‘ತಿನ್ನುವುದಕ್ಕಾಗಿ ಬದುಕಿದ್ದೇನೆ’ ಎನ್ನುವುದು ಉತ್ತರವಾಗಿದ್ದರೆ ಅದು ತಪ್ಪು. ಪ್ರಾಣಿಗಳು ಮಾತ್ರವೇ ತಿನ್ನುವುದಕ್ಕಾಗಿ ಬದುಕುತ್ತವೆ. ತಿನ್ನುವುದು ಬಿಟ್ಟರೆ ಪ್ರಾಣಿಗಳು ಬೇರೆ ಯಾವ ಕೆಲಸವನ್ನೂ ಮಾಡುವುದಿಲ್ಲ. ಅಫ್ಕೋರ್ಸ್, ಕೆಲ ಮನುಷ್ಯರು ಹಾಗೇ ಇರುತ್ತಾರೆ ಬಿಡಿ! ಇನ್ನು ‘ಬದುಕುವುದಕ್ಕೆ ತಿನ್ನುತ್ತಿದ್ದೇವೆ’ ಎನ್ನುವುದು ಉತ್ತರವಾದರೆ ಅದು ಕೂಡ ತಪ್ಪೇ. ಪ್ರಾಣಿಗಳು ಒಂದೇ ಆಹಾರ ತಿನ್ನುತ್ತವೆ. ನಾವು ಬಗೆಬಗೆಯ ಐಸ್ಕ್ರೀಮ್ಳು, ಬಿರಿಯಾನಿಯನ್ನು ಕೂಡ ಆಸ್ವಾದಿಸುತ್ತೇವೆ. ತಿನ್ನುವುದು ಪ್ರಾಣಿಗಳಿಗೆ ಒಂದು ಅಗತ್ಯ ಮಾತ್ರವೇ. ಅದು ನಮಗೊಂದು ಆನಂದ. ಆದರೆ ಪ್ರಾಣಿಗಳು ತಿನ್ನುವುದರಲ್ಲಿ ಶಿಸ್ತು ಇರುವುದಿಲ್ಲ, ಸದಾ ತಿನ್ನುತ್ತಿರುತ್ತವೆ. ಯಾವಾಗಂದರೆ ಆಗ, ಎಲ್ಲೆಂದರೆ ಅಲ್ಲಿ, ಯಾವುದು ಕಂಡರೆ ಅದು- ಹೀಗೆ ತಿನ್ನುವವರನ್ನು ಕತ್ತೆ ಎನ್ನುತ್ತಾರೆ. ಭಾನುವಾರ ಒಂದು ದಿನ ತಿನ್ನುವುದಕ್ಕೆ ಬದುಕುತ್ತ, ಉಳಿದ ದಿನ ಬದುಕುವುದಕ್ಕಾಗಿ ತಿಂದರೆ ಆಹಾರದಲ್ಲಿನ ಆನಂದ ಅರ್ಥವಾಗುತ್ತದೆ.
4.ಕೇಳುವ ಶಿಸ್ತು: ಮಕ್ಕಳಿಗೆ ಸೂಚನೆ- ‘ಅಗತ್ಯವಿರುವಾಗ ಮಾತನಾಡದಿ ರುವುದು ತಪ್ಪು. ಅಗತ್ಯವಿಲ್ಲದಾಗ ಮಾತಾಡಿದರೆ ಅದೂ ತಪ್ಪು’. ಏಕಾಗ್ರತೆ ಬೆಳೆಯುವುದಕ್ಕಾಗಿ ಪ್ರತಿದಿನ ಒಂದು ತಾಸು ಮೌನವಾಗಿರಿ. ನಿಮ್ಮಲ್ಲಾದ ಬದಲಾವಣೆ ಕಂಡು ನೀವೇ ಆಶ್ಚರ್ಯಪಡುತ್ತೀರಿ.
ಅಷ್ಟೇ ಏಕೆ? ನಿಮ್ಮ ಸ್ನೇಹಿತರು ಮಾತಾಡಿಕೊಳ್ಳುತ್ತಿರುವಾಗ ಸ್ವಲ್ಪ ಹೊತ್ತು ಕೇಳುತ್ತಿರಿ. ‘ಕೆಲಸಕ್ಕೆ ಬಾರದ’ ಎಷ್ಟೊಂದು ವಿಷಯಗಳಲ್ಲಿ ಮನುಷ್ಯ ತನ್ನ ಶಕ್ತಿಯನ್ನು ಖರ್ಚುಮಾಡುತ್ತಾನೆ ಎಂಬುದು ಅರ್ಥವಾಗುತ್ತದೆ. ಮೇಧಾವಿಗಳನ್ನು, ಅತ್ಯುನ್ನತ ಸ್ಥಾನದಲ್ಲಿರುವವರನ್ನು ಪರಿಶೀಲಿಸಿ ಗಮನಿಸಿದರೆ ಅವರೆಲ್ಲ ಏಣಿಯ ಮೆಟ್ಟಿಲುಗಳನ್ನು ಹತ್ತುತ್ತಿರುವಂತೆ ಅವರ ಮಾತುಗಳು ಕಡಿಮೆ ಆಗುತ್ತವೆ ಎನ್ನುವುದು ಅರ್ಥವಾಗುತ್ತದೆ.
ನೋಟ, ರುಚಿ, ಶ್ರವಣ, ವಾಚಾಳಿತನ ಎಂಬ ನಾಲ್ಕು ಬಯಕೆಗಳನ್ನು ಕಂಟ್ರೋಲ್ ಮಾಡಿಕೊಳ್ಳುವ ಮೂಲಕ ಮುಖ್ಯವಾದ ಜ್ಞಾನೇಂದ್ರಿಯಗಳನ್ನು ನಮ್ಮ ಸ್ವಾಧೀನದಲ್ಲಿ ಇಟ್ಟುಕೊಳ್ಳಬಹುದು. ಏಕಾಗ್ರತೆಗೆ ಇದೇ ಮೊದಲನೆ ಮೆಟ್ಟಿಲು.
ಕೌಮಾರ್ಯದ ಕುರಿತು ಒಂದಿಷ್ಟು
ಬಾಲ್ಯ-ಟೀನೇಜ್ಗಳ ನಡುವಿನ ಹಂತ (7-12) ಇದು. ಮಕ್ಕಳ ಭವಿಷ್ಯಕ್ಕಾಗಿ ನೆಲವನ್ನು ಉಳುಮೆ ಮಾಡುವುದು ಬಾಲ್ಯವಾದರೆ, ಪ್ಲಾನ್ ಮಾಡುವುದು, ತಳಪಾಯ ಹಾಕುವ ಹಂತ ‘ಟ್ವೀನೀಸ್’! ಭವನ ಬಲವಾಗಿರಬೇಕೆಂದರೆ ತಳಪಾಯ ಭದ್ರವಾಗಿರಬೇಕು. ಮಕ್ಕಳು ಓದಿನಲ್ಲಿ ರ್ಯಾಂಕರ್ಸ್ ಆಗುತ್ತಾರಾ? ಸ್ಪೋರ್ಟ್ಸ್ನಲ್ಲಿ ಮೇಲೆ ಬರುತ್ತಾರಾ? ಸಿಂಗಿಂಗ್, ಪೇಂಟಿಂಗ್, ಮ್ಯೂಸಿಕ್ ಮುಂತಾದ ಕಲೆಗಳಲ್ಲಿ ಆಸಕ್ತಿ ಇದೆಯಾ? ಎನ್ನುವುದು ಬೆಳಕಿಗೆ ಬರುವುದು ಈ ವಯಸ್ಸಿನಲ್ಲೇ. ಹುಡುಗನ ಸ್ಮಾರ್ಟ್ಫೋನ್ಗಳ ಜ್ಞಾನವನ್ನು ಕಂಡು ಅದೆಲ್ಲ ಅವನ ಬುದ್ಧಿವಂತಿಕೆ, ಜಾಣತನದ ದ್ಯೋತಕವೆಂದು ಹಿರಿಯರು ಹಿರಿಹಿರಿ ಹಿಗ್ಗುವುದು ಈ ಹಂತದಲ್ಲಿಯೇ! ಇದರ ಮುಂದಿನ ಹಂತವಾದ ಟೀನೇಜ್ ರಾಜಭವನವಾಗುತ್ತದೆಯೋ, ದೆವ್ವದ ಬಂಗಲೆ ಆಗುತ್ತದೆಯೋ ಎನ್ನುವುದನ್ನು ನಿರ್ಣಯಿಸುವ ಹಂತವೂ ಇದೇನೇ. ‘ಟ್ವೀನೀಸ್’ಗೆ ಅಷ್ಟು ಮಹತ್ವವಿದೆ. ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ, ಬಾಲ್ಯದಲ್ಲಿ ಹೊಲವನ್ನು ಉತ್ತು ಬಿತ್ತನೆ ಮಾಡಿದೆವು. ಸಸಿ ಮೊಳಕೆಯೊಡೆಯಿತು. ಅಗತ್ಯವಾದಷ್ಟು ನೀರು, ಗೊಬ್ಬರ ಹಾಕಬೇಕಾದ ಹಂತ ಇದು! ಈ ವಯಸ್ಸಿನಲ್ಲಿ ಮಕ್ಕಳ ಬೆಳವಣಿಗೆ ಆರೋಗ್ಯಕರವಾಗಿದ್ದರೆ, ಆ ನಂತರ ಬರುವ ಟೀನೇಜ್ ಸ್ಟೇಜ್ನಲ್ಲಿ ಕೀಟನಾಶಕಗಳನ್ನು ಬಳಸುವ ಅಗತ್ಯ ಬರುವುದಿಲ್ಲ. ಅಂದರೆ ಮಕ್ಕಳಿಂದ ಸಮಸ್ಯೆಗಳು ಹೆಚ್ಚಾಗಿ ಬರುವುದಿಲ್ಲ ಎಂದೂ ಅರ್ಥೈಸಬಹುದು.
ಕಭಿ ಗಮ್ಕಭಿ ಖುಷಿ
ಆಪಲ್ ತಿನ್ನಬೇಡ ಎಂದನು ಸೃಷ್ಟಿಕರ್ತ. ‘ಏಕೆ?’ ಎಂದನು ಮಾನವ. ‘ಕಾರಣ ಕೇಳಬೇಡ, ಆಪಲ್ ತಿನ್ನಕೂಡದು ಅಷ್ಟೇ’ ಎಂದು ಅರಚಿದನು ದೇವರು. ಅವನ ಮಾತು ಕೇಳದ ಮಾನವ, ಜತೆಗೆ ಅವನ ಹೆಂಡತಿಯೂ ಆಪಲ್ ತಿಂದರು. ಕೋಪಗೊಂಡ ದೇವರು ಅವರಿಗೊಂದು ಪಾಠ ಕಲಿಸಬೇಕೆಂದುಕೊಂಡನು. ಅವರಿಗೆ ಸಂತಾನವನ್ನು ನೀಡಿದನು.
‘ನಾನು ದೆವ್ವವನ್ನೋ, ರಾಕ್ಷಸನನ್ನೋ ಬೆಳೆಸುತ್ತಿದ್ದೇನೇನು?’ ಎನ್ನುವುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಉತ್ತರ- ‘ಅಲ್ಲ, ಖಂಡಿತ ಅಲ್ಲ’! ಮನೆಯ ಸದಸ್ಯರೆಲ್ಲರೂ ಮತ್ತೆಮತ್ತೆ ಆನಂದಬಾಷ್ಪ ಸುರಿಸುವುದನ್ನು ಟಿ.ವಿ. ಜಾಹೀರಾತುಗಳಲ್ಲಿ ಮಾತ್ರ ನೋಡುತ್ತೇವೆ. ಮನೆ ಎಂದ ಮೇಲೆ ಘರ್ಷಣೆಗಳಿದ್ದೇ ಇರುತ್ತವೆ. ಆದರೆ ಪ್ರಯತ್ನಪಟ್ಟರೆ ‘ಹೌಸ್’ ಅನ್ನು ‘ಹೋಮ್ ಆಗಿ ಮಾಡಿಕೊಳ್ಳಬಹುದು.
Comments
Post a Comment