book reading
ಮಕ್ಕಳಿಗೆ ಪುಸ್ತಕಗಳನ್ನು ಓದಿಸಲು ಪ್ರಾರಂಭ ಮಾಡೋದು ಹೇಗೆ? ಅದಕ್ಕೂ ಒಂದು ಕ್ರಮ ಅಂತಿದ್ಯಾ? ಈ ಬಾರಿಯ ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಈ ಕುರಿತ ಸವಿಸ್ತಾರವಾದ ಲೇಖನ. ಆಯಾ ವಯಸ್ಸಿನ ಮಕ್ಕಳಿಗೆ (10 ತಿಂಗಳಿಂದ 15 ವರ್ಷ) ಸರಿ ಹೊಂದುವ ಪುಸ್ತಕಗಳ ಹೆಸರೂ ಇದೆ. ಇದಲ್ಲದೆ ಇನ್ನೂ ಸಾಕಷ್ಟು ಪುಸ್ತಕಗಳಿವೆ. ಅವುಗಳ ಹೆಸರನ್ನು ನೀವೂ ತಿಳಿಸಿ. ಆಸಕ್ತರಿಗೆ ಸಹಾಯವಾದೀತು.
ನನಗೆ ಪುಸ್ತಕಗಳ ಕುರಿತು ಮಾಹಿತಿ ಕೊಟ್ಟ ಮತ್ತು ಯಾವ ವಯಸ್ಸಿಗೆ ಯಾವ ಪುಸ್ತಕ ಸರಿ ಹೊಂದುತ್ತದೆ ಎಂಬ ಬಗ್ಗೆ ನಿಖರ ಮಾಹಿತಿಯುಳ್ಳ 'ಬುಕ್ ವರ್ಲ್ಡ್' ಗ್ರಂಥಾಲಯದ (ರಾಜರಾಜೇಶ್ವರಿ ನಗರ) ಸ್ಥಾಪಕಿಯಾದ ರೇಣುಕಾ ಅವರಿಗೂ ಧನ್ಯವಾದ. ಅವರ ಓದು ಮತ್ತು ಪುಸ್ತಕದ ಕುರಿತ ಜ್ಞಾನ ಅಪಾರ.
ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ..
(ವಿ.ಸೂ- ಆರಾಮಾಗಿ ಓದಿ. ಇದು ಲಾಂಗ್ ಪೋಸ್ಟ್)
†**********†
ಮಕ್ಕಳಲ್ಲಿ ಚಿಗುರಲಿ ಪುಸ್ತಕ ಪ್ರೀತಿ
-ಶ್ರೀಕಲಾ ಡಿ.ಎಸ್.
`ಕಥೆ ಪುಸ್ತಕ ಇದೆ. ಆದ್ರೆ ನನ್ನ ಮಗ ಓದೋದೇ ಇಲ್ಲ. ಹೋಗ್ಲಿ, ಪುಸ್ತಕ ತೆರೆದು ಅದರಲ್ಲಿರೋ ಚಿತ್ರಾನೂ ನೋಡೋದಿಲ್ಲ’ ಇದು ಬಹುತೇಕ ಹೆತ್ತವರು ತಮ್ಮ ಮಕ್ಕಳ ಮೇಲೆ ಮಾಡುವ ಮಾಮೂಲು ದೂರು.
ನಿರಂತರವಾಗಿ ಓದುತ್ತಿದ್ದ ಹುಡುಗ ಯಾವುದೋ ಒಂದು ಅವಧಿಯಲ್ಲಿ ಓದುವತ್ತ ಗಮನ ಹರಿಸುತ್ತಿಲ್ಲ ಎಂದಾದರೆ ಬದಲಾದ ಆಸಕ್ತಿ ಕಾರಣವಿದ್ದೀತು. ಆದರೆ ಯಾವತ್ತೂ ಕಥೆ ಪುಸ್ತಕ ಓದಿಲ್ಲ ಅಂತಾದರೆ ಅದು ಆಸಕ್ತಿದಾಯಕ ಸಂಗತಿಯೇ ಆಗಿಲ್ಲ ಎಂದರ್ಥ. ಹಾಗಿದ್ದರೆ ಆಸಕ್ತಿ ಮೂಡಿಸುವುದು ಯಾರ ಕೆಲಸ?
ಮಕ್ಕಳ ವಯಸ್ಸಿಗೆ ತಕ್ಕನಾಗಿ ಕಥೆಗಳನ್ನು ಹೇಳುವುದೂ ಒಂದು ಕಲೆಯೇ. ಓದಿಗೆ ಅಡಿಪಾಯ ಹಾಕಿಕೊಡುವತ್ತ ಆರಂಭದಲ್ಲಿ ಹೆತ್ತವರು ಕೊಂಚ ಶ್ರಮ ವಹಿಸಬೇಕು. ಕಥೆಗಳನ್ನು ದೊಡ್ಡವರು ಓದಿ ನಂತರ ಮಕ್ಕಳ ಭಾಷಾ ಜ್ಞಾನಕ್ಕೆ ತಕ್ಕನಾಗಿ ಸರಳೀಕರಿಸುತ್ತಾ, ರಸವತ್ತಾಗಿ ವಿವರಿಸಿದಾಗ ಪುಸ್ತಕಗಳತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ. ಓದಿನಿಂದ ಮಕ್ಕಳ ಕಲ್ಪನಾ ಸಾಮರ್ಥ್ಯ, ಕ್ರಿಯಾಶೀಲತೆ ಬಲಗೊಳ್ಳುವ ಜೊತೆಗೆ, ಹತ್ತಾರು ಬಗೆಯ ಅನುಭವಗಳಿಗೆ ತೆರೆದುಕೊಳ್ಳುತ್ತಾ ಭಾಷೆಯನ್ನೂ ಉತ್ತಮವಾಗಿಸಿಕೊಳ್ಳುತ್ತಾರೆ. ಜ್ಞಾನದ ಹಾದಿ ತೆರೆಯುವುದೇ ಓದಿದಾಗ.
**********
ಮೂರರ ಒಳಗಿನ ಓದು- ಕಥಾ ಲೋಕದ ಸವಿ ಉಣ್ಣಿಸುವ ಕಾಲ
******
ನನ್ನ ಮಕ್ಕಳಿಬ್ಬರ ಮೊದಲ ಪುಸ್ತಕ- `ಮೈ ಬಾಡಿ ಪಾರ್ಟ್ಸ್’. ಸಾಮಾನ್ಯವಾಗಿ ಎಲ್ಲಾ ಆಟಿಕೆಗಳ ಅಂಗಡಿಯಲ್ಲೂ ಸಿಗುವ ದಪ್ಪ ರಟ್ಟಿರುವ ಪುಟಾಣಿ ಮಕ್ಕಳ ಪುಸ್ತಕ. ಇಬ್ಬರಿಗೂ ಬಹಳವೇ ಅಚ್ಚುಮೆಚ್ಚಿನ ಪುಸ್ತಕವಾದ ಇದನ್ನು ಅವರ ಕೈಗೆ ಹಿಡಿಸಿದ್ದು ಹೆಚ್ಚು-ಕಡಿಮೆ ಹತ್ತನೇ ತಿಂಗಳಲ್ಲಿ. ಪಾಪು ನಿಂತಿರುವುದು-ಮಲಗಿರುವುದು, ಹಾಲು ಕುಡಿಯುತ್ತಿರುವುದು, ಕಣ್ಣು, ಮೂಗು, ಬಾಯಿಯ ಚಿತ್ರಗಳಿರುವ ಈ ಪುಸ್ತಕ ಬಹುಬೇಗ ಸೆಳೆಯುತ್ತದೆ. ಏಕೆಂದರೆ ಇವೆಲ್ಲಾ ಮಗುವಿನ ಪ್ರಪಂಚದ ಸಂಗತಿಗಳು. ನಿತ್ಯವೂ ಮಕ್ಕಳು ಇವೆಲ್ಲಾ ಕೆಲಸ ಮಾಡುವುದರಿಂದ ಚಿತ್ರವನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತವೆ. ಅಂದರೆ ಮೊದಮೊದಲು ಮಕ್ಕಳಿಗೆ ಕೊಡುವ ಪುಸ್ತಕಗಳು ಅವರ ಪ್ರಪಂಚಕ್ಕೆ ಅರ್ಥವಾಗುವಂತೆಯೂ, ಚಿತ್ರಗಳಿಂದ ತುಂಬಿರಬೇಕಾದದ್ದೂ ಬಹಳ ಮುಖ್ಯ. ತರಕಾರಿ, ಹಕ್ಕಿಗಳು, ಪ್ರಾಣಿಗಳು, ಬಣ್ಣಗಳು, ವಾಹನಗಳು.. ಹೀಗೆ ಇದರಲ್ಲೂ ವಿಧಗಳಿವೆ. ದೊಡ್ಡ ಚಿತ್ರಗಳಿರುವ ಬಣ್ಣಬಣ್ಣದ ಕಥೆ ಪುಸ್ತಕಗಳೂ ಸಾಕಷ್ಟಿವೆ.
ಈ ಎಳೆಯ ವಯಸ್ಸಲ್ಲಿ ಏಕಾಗ್ರತೆಯ ಮಟ್ಟ ಹೆಚ್ಚಿಲ್ಲದೆ ಇರುವುದು ಒಂದು ಸವಾಲಾದರೆ, ಅರ್ಥ ಮಾಡಿಸುವುದು ಇನ್ನೊಂದು ಕಾರ್ಯ. ಪುಸ್ತಕದಲ್ಲಿ ಬರೆದದ್ದನ್ನು ಬರೆದಂತೆಯೇ ಓದಿ ಹೇಳಿದರೆ ಅವರು ಇಷ್ಟ ಪಡುವುದಿಲ್ಲ. `ಆನೆ ನೀರಿನಲ್ಲಿ ಸ್ನಾನ ಮಾಡುತ್ತಿತ್ತು’ ಎಂದು ಕಥೆಯಲ್ಲಿ ಬರೆದಿರಬಹುದು. ಇಲ್ಲಿ ಆನೆಯ ಆಕೃತಿ ಎಷ್ಟು ದೊಡ್ಡದು ಎಂದು ಕೈಯನ್ನು ಅಗಲಕ್ಕೆ ಚಾಚಿ ತೋರಿಸಬೇಕು. ಸೊಂಡಿಲು, ದಂತ, ಬಾಲ, ಬಣ್ಣ ಹೇಗಿದೆ ತಿಳಿಸಬೇಕು. ಸ್ನಾನದ ಹೊತ್ತಲ್ಲಿ ಆನೆ ಹೇಗೆಲ್ಲಾ ಮಜಾ ಮಾಡಿರಬಹುದು ಎಂಬುದನ್ನು ಹೇಳಬೇಕು. ಹೀಗೆ ಇರುವ ಒಂದು ಸಾಲನ್ನು ನಮ್ಮ ಕಲ್ಪನಾ ಲೋಕ ಎಷ್ಟು ವಿಸ್ತಾರಗೊಳ್ಳುತ್ತದೋ ಅಷ್ಟು ವಿಸ್ತರಿಸಿ ಮಗುವಿಗೆ ಹೇಳಬೇಕು.
ಶೂ ಚಿತ್ರ ಇತ್ತು ಎಂದಾದರೆ, “ತಗೋ.. ಈ ಶೂ ನಿಂಗೆ ಹಾಕ್ಲಾ?” ಎಂದು ಆ ಪುಸ್ತಕದಿಂದ ತೆಗೆದಂತೆ ಮಾಡಿ ಕಾಲಿಗೆ ತೊಡಿಸಬೇಕು. ಈ ವಯಸ್ಸಲ್ಲಿ ಒಟ್ಟಾರೆ ಉದ್ದೇಶ ಕಥೆ ಹೇಳುವ ಜೊತೆಗೆ ಮಕ್ಕಳ ಆಟದ ಮನಸ್ಥಿತಿಗೆ ತಕ್ಕನಾಗಿ ಪ್ರತಿಕ್ರಿಯಿಸುವುದೂ ಆಗಬೇಕು. ಅವರ ಮಟ್ಟಕ್ಕಿಳಿದು ಓದಿಸುವ ತಾಳ್ಮೆ ಮತ್ತು ಎಲ್ಲವನ್ನೂ ಮಜವಾಗಿಸುವ ಕಲೆ ಕರಗತ ಮಾಡಿಕೊಳ್ಳುವುದೇ ಇಲ್ಲಿ ಹೆತ್ತವರಿಗಿರುವ ಸವಾಲು.
ಇಷ್ಟು ತಯಾರಿ ಎರಡು ವರ್ಷದೊಳಗಾದರೆ ಮೂರನೇ ವರ್ಷಕ್ಕೆ ಕಥೆ ಹೇಳುವುದು ಸುಲಭ. ಸಾಕಷ್ಟು ಹಾವಭಾವಗಳನ್ನು ಬೆರೆಸಿ ಕಥೆಗಳ ಲೋಕಕ್ಕೆ ಸೆಳೆಯಬೇಕು. ಮಗು ಒಂದೇ ಕಥೆಯನ್ನು ಹತ್ತು ಬಾರಿ ಹೇಳುವಂತೆ ಪೀಡಿಸಿದರೂ, ತಾಳ್ಮೆ ಕಳೆದುಕೊಳ್ಳದೆ ಹತ್ತು ಬಾರಿಯೂ ಥರಥರವಾಗಿ ಬಣ್ಣಿಸಬೇಕು. ಮಕ್ಕಳಿಗೆ ಪುನರಾವರ್ತನೆ ಬಹಳವೇ ಇಷ್ಟ.
ಏನೆಲ್ಲಾ ಓದಿಸಬಹುದು- ತರಕಾರಿ, ಹಕ್ಕಿ, ಪ್ರಾಣಿ, ವಾಹನ ಇತ್ಯಾದಿ ಚಿತ್ರಗಳಿರುವ ದಪ್ಪ ರಟ್ಟಿನ ಪುಸ್ತಕ, ದೊಡ್ಡ ಚಿತ್ರಗಳಿರುವ ಬಣ್ಣ ಬಣ್ಣದ ಕಥೆ ಪುಸ್ತಕ.
**************
ನಾಲ್ಕರಿಂದ ಏಳು-ಕಥೆ ಕೇಳುತ್ತಾ ಓದಿಗೆ ತೆರೆದುಕೊಳ್ಳುವ ಕಾಲ
******
ಈ ವಯಸ್ಸಲ್ಲಿ ಚಿತ್ರಗಳನ್ನು ತೋರಿಸುತ್ತಾ ಕಥೆಗಳನ್ನು ಹೇಳುವ ಮೂಲಕ ಪುಸ್ತಕ ಲೋಕದ ಮೇಲೆ ಮಗು ಗಾಢವಾದ ಪ್ರೀತಿ ಬೆಳೆಸಿಕೊಳ್ಳುವಂತೆ ಮಾಡಬಹುದು. ದೊಡ್ಡ ಚಿತ್ರಗಳೇ ಇರಬೇಕಾಗಿಯೇನೂ ಇಲ್ಲ. ಕಥೆ ಕೇಳುವುದು ಈಗಾಗಲೇ ಅಭ್ಯಾಸವಾಗಿದ್ದಲ್ಲಿ ಆರಾಮಾಗಿ ಮಕ್ಕಳು ಕೂತು ಕಥೆ ಕೇಳುತ್ತಾರೆ. ಹೊಸದಾಗಿ ಕಥೆ ಹೇಳಲು ಆರಂಭಿಸುವುದಾದರೆ ದೊಡ್ಡ ಚಿತ್ರಗಳಿರುವ ಪುಸ್ತಕದಿಂದಲೇ ಶುರುವಾಗಲಿ.
ಅಕ್ಷರಗಳ ಪರಿಚಯ ಈಗಷ್ಟೇ ಆಗುತ್ತಿರುವ ವಯಸ್ಸಿದು. ಆರು ವರ್ಷವಾಗುತ್ತಿದ್ದಂತೆ ಒಂದೊಂದೇ ಶಬ್ದ ಕೂಡಿಸಿ ಓದಲು ಪ್ರೇರೇಪಿಸಬೇಕು. ಹಾಗೆ ಒಂದೊಂದೇ ಸಾಲು, ಪ್ಯಾರಾಗ್ರಾಫ್ ಓದುತ್ತಾ ಪೂರ್ಣ ಕಥೆ, ನಂತರ ಇಡೀ ಪುಸ್ತಕ ಓದುವ ಅಭ್ಯಾಸದ ರೂಢಿಗೆ ಅಡಿಪಾಯ ಕಟ್ಟಲ್ಪಡುತ್ತದೆ. ಮಕ್ಕಳಿಂದ ಮಕ್ಕಳಿಗೆ ಈ ಓದುವಿಕೆಯ ಗತಿಯಲ್ಲೂ ವ್ಯತ್ಯಾಸವಿದ್ದೀತು. ಆದರೂ ಹೆತ್ತವರು ಕಥೆ ಹೇಳುವುದು ಸಂಪೂರ್ಣ ನಿಂತಿರುವುದಿಲ್ಲ.
ಏನೆಲ್ಲಾ ಓದಿಸಬಹುದು- ಎಲ್ಲಾ ಥರದ ಮಕ್ಕಳ ಕಥೆ ಪುಸ್ತಕಗಳನ್ನು ಕೊಡುವ ವಯಸ್ಸಿದು. ಬೆಡ್ ಟೈಮ್ ಸ್ಟೋರೀಸ್, ರಾಮಾಯಣ, ಮಹಾಭಾರತ, ಶಿವ, ಗಣೇಶ, ಕೃಷ್ಣ ಕಥೆಗಳು, ಈಸೋಪನ ನೀತಿ ಕಥೆಗಳು, ಪಂಚತಂತ್ರ, ತೆನಾಲಿರಾಮ, ಅಕ್ಬರ್-ಬೀರ್‌ಬಲ್, ಜಾತಕ ಕಥೆಗಳು ಇತ್ಯಾದಿ.
***********
ಎಂಟರ ನಂತರ- ಖುದ್ದು ಓದುತ್ತಾ ಅರಳುವ ಕಾಲ
******
ಇಷ್ಟು ವರ್ಷದ ಪುಸ್ತಕದ ಒಡನಾಟ ಈಗ ಹೆಚ್ಚೆಚ್ಚು ಫಲ ಕೊಡುತ್ತದೆ. ಬಹಳ ಆಸಕ್ತಿಯಿಂದ ಎಲ್ಲಾ ಪುಸ್ತಕಗಳನ್ನು ಓದುವಂತಾಗುತ್ತಾರೆ. ಎಂಟರ ವಯಸ್ಸಲ್ಲಿ ಸಾಮಾನ್ಯವಾಗಿ ಚಿತ್ರಕಥೆಗಳ ಸರಣಿಯ ಮೂಲಕ ಖುದ್ದು ಓದಿಗೆ ತೆರೆದುಕೊಳ್ಳಬಹುದು. ಅದಾಗುತ್ತಲೇ ಸಾಹಸ ಕಥೆಗಳು, ಚಿಕ್ಕ ಕಾದಂಬರಿಗಳನ್ನೂ ಕೊಡಬಹುದು. ಗ್ರಂಥಾಲಯದ ಪರಿಚಯವನ್ನು ಈಗಲೇ ಮಾಡುವುದು ಉತ್ತಮ. ಈವರೆಗೆ ನಮಗೆ ಇಷ್ಟವಾದ ಪುಸ್ತಕಗಳನ್ನೇ ಮಕ್ಕಳಿಗೆ ಕೊಟ್ಟಿರುತ್ತೇವೆ. ಈಗ ವೈವಿಧ್ಯಮಯ ಪುಸ್ತಕಗಳನ್ನು ಅವರೇ ಆಯ್ದುಕೊಳ್ಳಬಹುದು. ಗ್ರಂಥಾಲಯದಲ್ಲೂ ಆಯಾ ವಯಸ್ಸಿಗೆ ತಕ್ಕನಾದ ಪುಸ್ತಕವನ್ನು ನೋಡಿ ಕೊಟ್ಟರೆ ಉತ್ತಮ. ಜೊತೆಗೆ ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ, ಋಷಿಗಳ ಕಥೆಗಳನ್ನು ಈ ವಯಸ್ಸಲ್ಲಿ ಹೇಳಲೇಬೇಕು. ಹನ್ನೆರಡರ ಮೇಲಂತೂ ಅವರವರ ಪಾಡಿಗೆ ತಮ್ಮಾಸಕ್ತಿಯ ಪುಸ್ತಕವನ್ನು ಓದುವುದು ಸಹಜವಾಗಿ ಬಿಡುತ್ತದೆ.
ಏನೆಲ್ಲಾ ಓದಿಸಬಹುದು- ಅಮರಚಿತ್ರಕಥಾ ಸರಣಿ, ವಸಂತ ಪ್ರಕಾಶನದ ಮಕ್ಕಳ ಕಥಾ ಪುಸ್ತಕಗಳು, ಪಂಜೆ ಮಂಗೇಶರಾಯರ ಮಕ್ಕಳ ಕಥೆ, ದಿನಕ್ಕೊಂದು ಕಥೆಗಳು, ರಾಮಕೃಷ್ಣಾಶ್ರಮದ ಮಕ್ಕಳ ಕಥಾ ಸರಣಿಗಳು, ಭಾರತ ಸಂಸ್ಕೃತಿ ಪ್ರಕಾಶನದ ಪೌರಾಣಿಕ ಪಾತ್ರದ ಸರಣಿ ಪುಸ್ತಕಗಳು, ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ-ಭಾರತಿಯ ೬೦೦ಕ್ಕೂ ಮೇಲ್ಪಟ್ಟ ಕಿರುಪುಸ್ತಕಗಳು, ಚಂದಮಾಮ ಕಥೆಗಳು, ಸುಧಾ ಮೂರ್ತಿ ಮಕ್ಕಳ ಕಥೆ ಪುಸ್ತಕ, ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾದ ಅನುವಾದಿತ ಕನ್ನಡ ಕಥೆಗಳು, ಲಾರಾ ಇಂಗಲ್ಸ್ ವೈಲ್ಡರ್ ಪುಟ್ಟ ಮನೆ ಸರಣಿ. ಇಂಗ್ಲಿಷ್‌ನಲ್ಲಿ ಎನಿಡ್ ಬ್ಲೈಟನ್ ಅವರ ಸೀಕ್ರೆಟ್ ಸೆವೆನ್ ಮತ್ತಿತರ ಸರಣಿಗಳು, ಜೆರೊನಿಮೊ ಸ್ಟಿಲ್ಟನ್ ಸರಣಿ, ಡೈರಿ ಆಫ್ ಎ ವಿಂಪಿ ಕಿಡ್, ಲ್ಯಾಂಡ್ ಆಫ್ ಸ್ಟೋರೀಸ್, ಕ್ಲಾಸಿಕ್ ಸ್ಟಾರ್ಟ್ಸ್, ರಸ್ಕಿನ್ ಬಾಂಡ್ ಕಥೆಗಳು ಇತ್ಯಾದಿ. ಋತುಮಾನ, ನವಕರ್ನಾಟಕ, ಸಪ್ನಾ ಬುಕ್‌ಹೌಸಿನ ವೆಬ್‌ಸೈಟಿನೊಳಗೆ ಹೋಗಿ ಹಣುಕಿದರೆ ಚಂದದ ಕನ್ನಡ ಕಥೆ ಪುಸ್ತಕಗಳು ಸಿಗುತ್ತವೆ. ಇಂಗ್ಲಿಷ್‌ನಲ್ಲೂ ಬೇಕಷ್ಟು ಅತ್ಯುತ್ತಮ ಪುಸ್ತಕಗಳಿವೆ. ಪುಸ್ತಕದಂಗಡಿಗೆ ಓಡಾಡುತ್ತಾ ಯಾವ ಪುಸ್ತಕ ಕೊಂಡರೆ ನನ್ನ ಮಕ್ಕಳಿಗೆ ಸರಿ ಎನ್ನುವುದು ನಮಗೇ ಗೊತ್ತಾಗುತ್ತದೆ.
ಪುಸ್ತಕಗಳನ್ನು ಆಪ್ತವಾಗಿಸುವ ಈ ಓದಿನ ಹಾದಿಯಲ್ಲಿ ಎಷ್ಟೋ ಬಾರಿ ಮಕ್ಕಳಿಗೆ ಓದಲು ಮನಸ್ಸಾಗದೆ ಹೋದೀತು. ತಂದ ಪುಸ್ತಕಗಳನ್ನು ನಾಲ್ಕೈದು ತಿಂಗಳಾದರೂ ಬಿಡಿಸದೆ ಇಡಬಹುದು. ಏನೇ ಆದರೂ ಪುಸ್ತಕದ ಜೊತೆಗಿನ ಒಡನಾಟವನ್ನಂತೂ ನಿಲ್ಲಿಸಬಾರದು. ಈಗಂತೂ ಮಕ್ಕಳಿಗಾಗಿಯೇ ಕಥೆ ಹೇಳುವ ಯೂಟ್ಯೂಬ್ ಚಾನೆಲ್, ಪಾಡ್‌ಕಾಸ್ಟ್, ಆ್ಯಪ್‌ಗಳಿವೆ. ಆದರೆ ಸಾಧ್ಯವಾದಷ್ಟೂ ಪುಸ್ತಕ ಓದಿಸಿಯೇ ಕಥೆ ಹೇಳುವುದಕ್ಕೆ ಒತ್ತು ಕೊಟ್ಟರೆ ಆ ಸೊಗಸೇ ಬೇರೆ. `ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ’ ಎನ್ನುತ್ತಾರೆ ಡಿವಿಜಿ. ನಾವಿರುವ ಡಿಜಿಟಲ್ ಕಾಲಕ್ಕೆ ಇನ್ನಷ್ಟು ಒಪ್ಪುತ್ತದೆ ಈ ಮಾತು. ಓದುತ್ತಾ ಅರಿವು ಅರಳಲಿ. ಮಕ್ಕಳ ಜೊತೆಗೆ ನಮ್ಮದೂ!
Comments
Post a Comment