ಸಜ್ಜನಿಕೆಯನ್ನು ಗುರುತಿಸೋಣ
ಹಿರಿಯರೊಬ್ಬರು ಹೇಳಿದ ಘಟನೆ.ಆ ಊರಿನಲ್ಲಿ ಹಣ್ಣಿನ ಅಂಗಡಿಯೊಂದಿತ್ತು. ಅಂಗಡಿಯ ಮಾಲೀಕ ವ್ಯಾಪಾರಕ್ಕೆ ಕೂರುತ್ತಿರಲಿಲ್ಲ. ಅದೊಮ್ಮೆ, ಹಣ್ಣು ಕೊಳ್ಳಲು ಬಂದ ಗೃಹಸ್ಥರೊಬ್ಬರು ಅಲ್ಲಿ ಹಣ್ಣು ಕೊಡುವವರೇ ಇಲ್ಲದ್ದನ್ನು ಗಮನಿಸಿ, ಅಂಗಡಿಯನ್ನೊಮ್ಮೆ ಕಣ್ಣಾಯಿಸಿದರು. ಅಲ್ಲೊಂದು ಬೋರ್ಡಿನ ಮೇಲೆ - 'ನನ್ನ ತಾಯಿಗೆ ಇನ್ನಿಲ್ಲದ ಕಾಯಿಲೆ. ಆಕೆಯ ಅಂತಿಮ ದಿನದಲ್ಲಿ ಜೊತೆಯಲ್ಲೇ ಇದ್ದುಕೊಂಡು ಸೇವೆ ಮಾಡಬೇಕಿದೆ. ತಪ್ಪು ಭಾವಿಸದೇ ನಿಮಗ್ಯಾವ ಹಣ್ಣುಗಳು ಬೇಕೋ ಅವುಗಳ ತೂಕ ಮಾಡಿ ಪಟ್ಟಿಯಲ್ಲಿರುವ ದರದಂತೆ ದಯಮಾಡಿ ಹಣವನ್ನು ಗಲ್ಲಾಪೆಟ್ಟಿಗೆಯಲ್ಲಿ ಹಾಕಿ' ಎನ್ನುವ ವಿನಂತಿ ಇತ್ತು. ಆ ಗೃಹಸ್ಥರು ವ್ಯಂಗ್ಯದ ನಗೆ ನಕ್ಕು, 'ಗಿರಾಕಿಗಳು ಸರಿಯಾದ ಮೊತ್ತವನ್ನು ಹಾಕಿ ಹಣ್ಣನ್ನು ಕೊಂಡೊಯ್ಯುವ ಸಂದರ್ಭ ಉಂಟಾ? ಈತ ಆದಷ್ಟು ಬೇಗ ಅಂಗಡಿ ಮುಚ್ಚುವುದು ಗ್ಯಾರಂಟಿ. ಹೇಗೂ ಸಂಜೆ ಬಾಗಿಲು ಹಾಕಲು ಬರುತ್ತಾನೆ. ಅವನಿಗೆ ತಿಳಿಹೇಳಬೇಕು' ಎಂದುಕೊಂಡು, ಹಿಂದಿರುಗಿದರು. ಆ ರಾತ್ರಿ ಆ ಗೃಹಸ್ಥರು ಬಂದು, ಬಾಗಿಲು ತೆರೆದೇ ಹೋಗುವ ಆತನ ಅವಿವೇಕಿತನಕ್ಕೆ ಬುದ್ಧಿಹೇಳಲು ಹೊರಟಾಗ ಅಂಗಡಿ ಮಾಲೀಕ ಹೇಳಿದ- 'ನಾನೂ ಮೊದಲು ನಿಮ್ಮಂತೆ ಯೋಚಿಸಿ ತಾಯಿಯೊಡನೆ ಹಾಗೆ ಮಾಡಲಾಗದು ಎಂದೆ. ಆಗ ಆಕೆ 'ಮಗು ನಾನು ಅಂತಿಮ ದಿನಗಳನ್ನು ಎಣಿಸುತ್ತಿರುವೆ. ನಾನು ಕಣ್ಣುಮುಚ್ಚುವಾಗ ನನ್ನೊಂದಿಗೆ ನೀನಿರಬೇಕು. ಅಂಗಡಿಯ ಚಿಂತೆ ಬಿಡು, ನಾನು ಆ ಭಗವಂತನಲ್ಲಿ ಪ್ರಾರ್ಥಿಸುವೆ. ನಾನು ಹೇಳಿದ್ದನ್ನು ಮಾಡು' ಎಂದಾಗ, ಆಕೆಯ ಅಣತಿಯಂತೆ ಅಂಗಡಿಯಲ್ಲಿ ಬೋರ್ಡ್ ಹಾಕಿ ಬಾಗಿಲು ತೆರೆದು ಹೋಗುತ್ತಿದ್ದೇನೆ' ಎಂದ. 'ಕೊಂಡೊಯ್ದ ಹಣ್ಣಿಗೆ ಹಣ ಹಾಕಿ ಹೋಗಿದ್ದಾರೆಯೇ ಒಮ್ಮೆ ಪರಿಶೀಲಿಸು' ಎಂದು ಆ ಗೃಹಸ್ಥ ಹೇಳಿದಾಗ, ಮಾಲಿಕ ಗಲ್ಲಾಪೆಟ್ಟಿಗೆಯಲ್ಲಿ ಹಾಕಿದ ಹಣ ಕೊಂಡೊಯ್ದ ಹಣ್ಣಿಗಿಂತ ಹೆಚ್ಚು ಇದ್ದುದ್ದನ್ನು ತೋರಿಸಿದ. ಜೊತೆಗೆ ಆತನ ತಾಯಿಯ ಆರೋಗ್ಯಕ್ಕೆ ಹಾರೈಸಿ ಕೆಲವರು ಸಿಹಿ ತಿನಿಸು, ಸೀರೆ, ಸ್ಪೆಟ ಇತ್ಯಾದಿ ಉಡುಗೊರೆ ಇಟ್ಟಿದ್ದರು. ಯುವ ವೈದ್ಯರೊಬ್ಬರು 'ನಿಮ್ಮ ತಾಯಿಯನ್ನು ನಮ್ಮ ಆಸ್ಪತ್ರೆಗೆ ಕರೆತನ್ನಿ. ಆಕೆಯ ಶುಶೂಷೆ ಹೊಣೆ ನನ್ನದು' ಎಂದು ವಿಸಿಟಿಂಗ್ ಕಾರ್ಡ್ ಇಟ್ಟಿದ್ದರು. ಇದನ್ನು ನೋಡಿ, ತನ್ನ ఆ
ನಿಷ್ಕರ್ಷೆಗೆ ಆ ಗೃಹಸ್ಥ ಪೆಚ್ಚಾದ. ಅನೇಕ ಬಾರಿ ನಮ್ಮ ಆಲೋಚನೆಗಳು ಹೀಗೆಯೇ! ಒಂದಷ್ಟು ಜನರ ಮೋಸ ವಂಚನೆ- ಕಪಟ ಕಂಡು, ಹೆಚ್ಚು ಜನರ ಸಜ್ಜನಿಕೆಯನ್ನು ಗಣಿಸದೆ ಇಡೀ ಜಗತ್ತೇ ವಂಚನೆಯುಳ್ಳದ್ದು ಎಂಬ ತೀರ್ಮಾನಕ್ಕೆ ಬರುತ್ತೇವೆ. ಹಾಗಾಗಿ ಕವಿನುಡಿಯೊಂದು ಹೀಗೆ ಹೇಳುತ್ತದೆ
ನಿಟ್ಟುಸಿರ ಬಿಡಬೇಡ, | ಕೆಟ್ಟ ಜನರಿಹರೆಂದು, ಮೊಟ್ಟ ಮೊದಲಾಗು ನೀ ಒಳ್ಳೆಯವನು/ ಕೆಟ್ಟ ಜನರಲ್ಲೊಬ್ಬ ಕಡಿಮೆಯಾದರೆ ಜಗಕೆ ಎಷ್ಟೊಂದು ಒಳ್ಳೆಯದು -ಬೋಳುಬಸವ ಎಂದು.
ಇಂದು ಬೇಕಾಗಿರುವುದು ಸಮಾಜವನ್ನು ದೂರುತ್ತಾ ಕಾಲ ನೂಕುವವರಲ್ಲ, ಸಮಾಜಕ್ಕೆ ಒಳ್ಳೆಯವರಾಗಿ ಬಾಳುವವರು. ಅಂಥವರಿಂದಲೇ ಅಲ್ಲವೇ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯವಾಗುವುದು?!
Comments
Post a Comment