ಭರವಸೆಯ ಬದುಕು...
ಭರವಸೆಯ ಬದುಕು...
ಶಾಲಾ ಶಿಕ್ಷಕರೊಬ್ಬರಿಗೆ ಪ್ರತಿದಿನವೂ ಬರೆಯುವ ಮೊದಲ ದಿನಚರಿ ಅಭ್ಯಾಸವಿತ್ತು. ಅದು ಹೊಸವರ್ಷದ ದಿನ. ಹಿಂದಿನ ದಿನವಷ್ಟೆ ವೃತ್ತಿಯಿಂದ ನಿವೃತ್ತಿ ಹೊಂದಿದ್ದರು. ಅವರು ಹೀಗಾಗಿ, ಏನನ್ನೂ ಕಳಕೊಂಡವರಂತೆ ಮನೆಯ ಕೋಣೆಯಲ್ಲಿ ಬೇಸರದಲ್ಲಿ ಕುಳಿತಿದ್ದರು. ಹಾಗೆಯೆ ಒಂದು ಹಾಳೆಯ ಮೇಲೆ ಬರೆಯಲಾರಂಭಿಸಿದರು- 'ಕಳೆದ ವರ್ಷ ನನ್ನ ಪಾಲಿಗೆ ಕೆಟ್ಟವರ್ಷವೆಂದೇ ಹೇಳಬೇಕು. ಕಾರಣ, ಈ ಅವಧಿಯಲ್ಲಿ ನನಗೆ ಶಸ್ತ್ರಚಿಕಿತ್ಸೆಯಾಗಿ ಜಠರದಲ್ಲಿದ್ದ ಹುಣ್ಣನ್ನು ತೆಗೆದರು. ಈ ಶಸ್ತ್ರಚಿಕಿತ್ಸೆಯಿಂದಾಗಿ ನಾನು ಬಹಳ ದಿನ ಹಾಸಿಗೆಯಲ್ಲಿ ಇರುವಂತಾಯಿತು. 95 ವರ್ಷ ವಯಸ್ಸಿನ ನನ್ನ ತಂದೆ ನಿಧನರಾಗಿದ್ದೂ ಕಳೆದ ವರ್ಷವೇ. ಅಪ್ಪ ನಿಧನರಾದ ಕೆಲವೇ ದಿನಗಳಲ್ಲಿ ನಮ್ಮಮ್ಮ ಕೂಡ ತೀರಿಕೊಂಡರು. ಈ ಮಧ್ಯೆ ಬೈಕ್ ಸವಾರಿ ಮಾಡುತ್ತಿದ್ದ ನನ್ನ ಮಗನಿಗೆ ಅಪಘಾತವಾಗಿ, ಆತ ವಾರ್ಷಿಕ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವಂತಾಯಿತು. ಸಾಲದ್ದಕ್ಕೆ ನನಗೆ ಕೆಲಸದಿಂದ ನಿವೃತ್ತಿಯೂ ಆಯಿತು. ಒಟ್ಟಿನಲ್ಲಿ, ಕಳೆದ ವರ್ಷವಿಡೀ ನನ್ನ ಪಾಲಿಗೆ ಕೆಟ್ಟದಾಗಿತ್ತು.' ಪತಿ ಹೀಗೆ ಚಿಂತಾಕಾಂತರಾಗಿರುವುದು ಪತ್ನಿಗೆ ಗೋಚರಿಸಿತು. ಇವರೇನು ಮಾಡುತ್ತಿರ ಬಹುದು ಎಂದುಕೊಂಡು ಸದ್ದಿಲ್ಲದೆ ಪತಿಯ ಕೋಣಿ ಪ್ರವೇಶಿಸಿದ ಆಕೆ, ಹಾಳೆಯ ಮೆಲೆ ಬರೆದಿಟ್ಟಿದ್ದನ್ನು ಓದಿಕೊಂಡರು. ಜತೆಗೆ ಇನ್ನೊಂದು ಹಾಳೆಯಲ್ಲಿ ಒಂದಿಷ್ಟು ಬರೆದು ಸದ್ದಿಲ್ಲದೆ ಅಡುಗೆಮನೆಗೆ ತೆರಳಿದರು.
ಹಾಳೆಯಲ್ಲಿ ಪತ್ನಿ ಬರೆದಿದ್ದು ಹೀಗಿತ್ತು: 'ಕಳೆದ ವರ್ಷ ಕೊನೆಗೂ ನನ್ನ ಜಠರದ ಹುಣ್ಣಿಗೆ ಶಸ್ತ್ರಚಿಕಿತ್ಸೆ ಆಯಿತು. ಆ ಹುಣ್ಣು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಸಂಭವ ಈ ಮೂಲಕ ತಪ್ಪಿತು ಹಾಗೂ ವರ್ಷಗಳಿಂದ ಅನುಭವಿಸುತ್ತಿದ್ದ ಬೇನೆಗೆ ಅಂತ್ಯ ಹಾಡಿದಂತಾಯಿತು. ಸುದೀರ್ಘ ಬದುಕು ಸಾಗಿಸಿದ, 95 ವರ್ಷ ವಯಸ್ಸಿನ ತಂದೆ ದೈವಾಧೀನರಾದರು, ಹೆಚ್ಚೇನೂ ನರಳದೆ ಮರೆಯಾದ ಅವರದು ಸುಖಮರಣವೆಂದೇ ಹೇಳಬೇಕು. ಇದಾದ ಕೆಲವೇ ದಿನಗಳಲ್ಲಿ ನಮ್ಮಮ್ಮ ಕೂಡ ತೀರಿಕೊಂಡರು, ಗಂಡನಿಲ್ಲದೆ ಒಂಟಿಯಾಗಿ ಬಾಳುವ ಪ್ರಮೇಯವನ್ನು ಅಮ್ಮ ತಪ್ಪಿಸಿಕೊಂಡರು. ಬೈಕ್ ಸವಾರಿಗೆ ತೆರಳಿದ್ದ ಮಗನಿಗೆ ಅಪಘಾತವೇನೊ ಆಯಿತು, ಆದರೆ ಅವನು ಬದುಕುಳಿದುಕೊಂಡನಲ್ಲ ಎಂಬುದು ಸಮಾಧಾನ. ನನಗೆ ವೃತ್ತಿಯಿಂದ ನಿವೃತ್ತಿಯಾಯಿತು, ಇದರಿಂದಾಗಿ ಇನ್ನೊಬ್ಬರಿಗೆ ಆ ಸ್ಥಾನ ತುಂಬುವ ಅವಕಾಶ ಸಿಕ್ಕಂತಾಯಿತು. ಅಂತೆಯೆ ನಾನು ನಿವೃತ್ತನಾಗಿದ್ದು ವೃತ್ತಿಯಿಂದಲೇ ಹೊರತು, ಪ್ರವೃತ್ತಿಗಳಿಂದ ಅಲ್ಲವಲ್ಲ. ಇನ್ನು ನನ್ನ ಅಭಿರುಚಿ ಪ್ರವೃತ್ತಿಗಳನ್ನು ಸಂತೋಷದಿಂದ ಪ್ರಾರಂಭಿಸಬಹುದು ಒಟ್ಟಾರೆ ಹೇಳುವುದಾದರೆ, ಕಳೆದ ವರ್ಷದಲ್ಲಿ ದೇವರ ಅಪಾರ ಕರುಣೆ ನನ್ನ ಮೇಲಿತ್ತು. ವರ್ಷ ಸರಿದಿದ್ದೇ ಗೊತ್ತಾಗಲಿಲ್ಲ ಎನ್ನುವಷ್ಟರ ಮಟ್ಟಿಗೆ ಚೆನ್ನಾಗೇ ಕಳೆಯಿತು ಎನ್ನಬಹುದು.' ಈ ಒಕ್ಕಣಿಯನ್ನು ಓದಿದ ಪತಿ, ಮಡದಿಯಿದ್ದಲ್ಲಿಗೆ ತೆರಳಿ ನಿನ್ನ ಗ್ರಹಿಕೆ
ನಿಜ ಎನ್ನುವ ಧಾಟಿಯಲ್ಲಿ ಮುಗುಲ್ನಕ್ಕರು. ತಾತ್ಪರ್ಯ ಇಷ್ಟೆ- ಭರವಸೆಯಿಂದ
ಬದುಕನ್ನು ಮುನ್ನಡೆಸುವುದಕ್ಕೆ ಸಕಾರಾತ್ಮಕ ಧೋರಣೆಯೇ ಮೂಲಮಂತ್ರ.
ಯಾವುದೇ ಸಮಸ್ಯೆ-ಸಂಕಟಗಳನ್ನು ನಾವು ನೋಡುವ ದೃಷ್ಟಿ ಬದಲಾದಂತೆ,
ದೃಶ್ಯವೂ ಬದಲಾಗುತ್ತಿರುತ್ತದೆ. ಸಮಾಧಾನದ ಕಿರಣವೂ ಹೊರಹೊಮ್ಮುತ್ತಿರುತ್ತದೆ.
Comments
Post a Comment